ಟಿಸಿಲೊಡೆಯಿತು ಅಣಬೆ


ಮಳೆಯ ಸಿಂಚನದಿಂದ ಅದಾವ ಮಾಯೆಯೊಳು ಭೂಮಿಯೊಳಗಿಂದ ಟಿಸಿಲೊಡೆಯುತ್ತವೆಯೋ ಅಣಬೆಗಳು... ಪ್ರಕೃತಿಯೇ ಉತ್ತರ ನೀಡಬೇಕು.
ನಾನಾ ಆಕಾರದಲ್ಲಿ ಸೃಷ್ಟಿಯಾದರೂ, ಕೊಡೆಯಾಕಾರ ಹೊಂದಿರುವ ಅಣಬೆಗಳಿಗೆ ನಾಯಿಕೊಡೆ ಎಂಬ ಹೆಸರು ಏಕೆ ಹುಟ್ಟಿತೋ ಗೊತ್ತಿಲ್ಲ. ನೋಡಲು ಕೊಡೆಯಾಕಾರದಲ್ಲಿರೂ ನಾಯಿಯಂತೂ ಅದನ್ನು ಎತ್ತಿಕೊಳ್ಳುವುದಿಲ್ಲ. ಆದರೂ ಅದನ್ನು ಆಡು ಮಾತಿನಲ್ಲಿ ನಾಯಿಕೊಡೆ ಎಂದೇ ಹೇಳುತ್ತೇವೆ.
ಮರಗಳ ಬುಡದಲ್ಲಿ, ಕೊಳೆತ ಮರದ ಬೊಡ್ಡೆ, ತರೆಗೆಲೆಗಳ ರಾಶಿಯಲ್ಲಿ ಅಣಬೆಗಳು ಹುಟ್ಟಿಕೊಳ್ಳುತ್ತವೆ. ಕೆಲವೊಂದು ಅಣಬೆಗಳು ಹೂವಿನಾಕಾರ ಹೊಂದಿದ್ದು, ಒಣಗಿದ ಬಳಿಕ ಗಟ್ಟಿಯಾಗಿ ಕೃತಕ ಹೂವಿನಂತೆ ಕಾಣುತ್ತವೆ.
ತುಳುವಿನಲ್ಲಿ ಲಾಂಬು ಎಂದು ಕರೆಯುವ ಅಣಬೆಗಳು ಗಾತ್ರ, ಆಕಾರದಿಂದ ಲೆಕ್ಕಕ್ಕೆ ಸಿಗದಷ್ಟು ವೈವಿಧ್ಯತೆಯನ್ನು ಹೊಂದಿದೆ. ಮರಗಳ ಮೇಲೆ ಬೆಳೆಯುವ ಅಣಬೆಗಳು ವಿಷಪೂರಿತವಾಗಿದ್ದರೂ, ಕೆಲವೊಂದು ಪ್ರಬೇಧಗಳನ್ನು ಖಾದ್ಯವಾಗಿಯೂ ಬಳಸಲಾಗುತ್ತದೆ. ಅಣಬೆಗಳನ್ನು ಖಾದ್ಯಕ್ಕಾಗಿಯೇ ಬೆಳೆಸಿ ಕೃಷಿ ಮಾಡುವ ಕಾಯಕದಲ್ಲೂ ಕೆಲವರು ನಿರತರಾಗಿದ್ದಾರೆ. 
ಕೃತಕವಾಗಿ ಅಣಬೆಯನ್ನು ಬೆಳೆಸಲಾಗುತ್ತದೆಯಾದರೂ, ಮಳೆಗಾಲದಲ್ಲಿ ನೈಸರ್ಗಿಕವಾಗಿ ಬೆಟ್ಟ ಗುಡ್ಡದಲ್ಲಿ ಖಾದ್ಯಕ್ಕೆ ಬಳಸಲಾಗುವ ಅಣಬೆಗಳು ಹುಟ್ಟಿಕೊಳ್ಳುತ್ತವೆ. ಕಲ್ಲಲಾಂಬು ಎಂದು ಕರೆಯಲಾಗುವ ಇವುಗಳ ಪದಾರ್ಥವನ್ನು ಸಸ್ಯಾಹಾರಿಗಳು `ಮಾಂಸಾಹಾರಿ' ರುಚಿ ಹೊಂದಿದೆ ಎಂಬ ಮಾತು ಹೇಳುವುದುಂಟು.
ಸಾಮಾನ್ಯವಾಗಿ ಮಳೆಗಾಲ ಹಾಗೂ ಬಳಿಕ ಕೊಳೆತ ಮರಗಿಡಗಳ ಬುಡದಲ್ಲಿ ತಲೆ ಎತ್ತುವ ಅಣಬೆಗಳು ಜೋರಿನ ಮಳೆ ಹಾಗೂ ಬಿಸಿಲಿಗೆ ಹಾಳಾಗಿ ಹೋಗುತ್ತವೆ. ಹುಟ್ಟಿ ಸಾಯುವ ಮಧ್ಯೆ ಅಲ್ಪ ಕಾಲದಲ್ಲಿ ಅವುಗಳ ಸೊಬಗು ಅನನ್ಯವಾಗಿರುತ್ತದೆ. ಇದು ಒಂದು ವಿಧದ ಫಂಗಸ್. ಸಾಮಾನ್ಯವಾಗಿ ಬಿಳಿ ಬಣ್ಣ ಹೊಂದಿದ್ದರೂ, ಕಂದು, ಕಪ್ಪು, ಗುಲಾಬಿ, ಹಳದಿ ಬಣ್ಣದಲ್ಲಿ ಕಾಣ ಸಿಗುತ್ತವೆ.