ಗತ ವೈಭವದತ್ತ ಗುಜ್ಜರಕೆರೆ

ಗತ ವೈಭವದತ್ತ ಗುಜ್ಜರಕೆರೆ ಹನ್ನೊಂದು ವರ್ಷದ ಹಿಂದೆ ಸ್ಥಳೀಯರು ನಡೆಸಿದ ಸಣ್ಣ ಪ್ರಯತ್ನವೀಗ ಫಲ ನೀಡಿದ್ದು, ಸಾವಿರಾರು ವರ್ಷದ ಹಿಂದಿನ ಐತಿಹಾಸಿಕ ಕೆರೆ ಮತ್ತೆ ನವೀಕರಣಗೊಂಡು ಜಲಮರುಪೂರಣಗೊಳ್ಳುವಂತಾಗಿದೆ.


ತ್ಯಾಜ್ಯ- ಹೂಳು ತುಂಬಿ ಮುಂದೊಂದು ದಿನ ಸಮತಟ್ಟುಗೊಂಡು ಕೇವಲ ಹೆಸರಿನಲ್ಲಿ ಮಾತ್ರ ಕೆರೆ ಉಳಿಯಬಹುದೇನೋ ಎಂಬ ಭೀತಿ ಎದುರುಗೊಳ್ಳುತ್ತಿದ್ದ ಜೆಪ್ಪು ಬಳಿಯ ಗುಜ್ಜರ ಕೆರೆ ಮತ್ತೆ ತನ್ನ ಗತ ವೈಭವನ್ನು ಮೈತಳೆದುಕೊಳ್ಳಲಿದೆ. ಸುಮಾರು ಎರಡು ಕೋಟಿ ರೂ. ವೆಚ್ಚದಲ್ಲಿ ಎರಡು ಹಂತದಲ್ಲಿ ಕಾಮಗಾರಿ ನಡೆಸಲಾಗಿದ್ದು, ಎರಡನೇ ಹಂತದ ಕಾಮಗಾರಿ ಈಗ ನಡೆಯುತ್ತಿದೆ.

ಕಾಮಗಾರಿ ಪ್ರಗತಿಯಲ್ಲಿ:

2008-09ನೇ ಸಾಲಿನ ಪಾಲಿಕೆ ಅಭಿವೃದ್ಧಿ ಕ್ರಿಯಾ ಯೋಜನೆಯಲ್ಲಿ 99.50 ಲಕ್ಷ ರೂ. ಮಂಜೂರಾಗಿದ್ದು, ಪ್ರಥಮ ಹಂತದ ಕಾಮಗಾರಿ ನಡೆಸಲಾಗಿತ್ತು. ಪ್ರಸ್ತುತ ಎರಡನೇ ಹಂತದ ಕಾಮಗಾರಿಗಾಗಿ ಮತ್ತೆ 90.5 ಲಕ್ಷ ರೂ.ವನ್ನು ಮಹಾನಗರಪಾಲಿಕೆ ಮಂಜೂರುಗೊಳಿಸಿದ್ದು, ಕಾಮಗಾರಿ ಪ್ರಗತಿಯಲ್ಲಿದೆ.

ಅಭಿವೃದ್ಧಿ ಕಾಮಗಾರಿಗೆ ಮುನ್ನ ಗುಜ್ಜರಕೆರೆ.


ಕೆರೆಯ ಸುತ್ತಲೂ ಮಣ್ಣ ತುಂಬಿಸಿ ಸಮತಟ್ಟುಗೊಳಿಸಲಾಗಿದ್ದು, ಕೆರೆಯ ಸುತ್ತಲಿನ ಗೋಡೆಯನ್ನು ಕಟ್ಟಲಾಗಿದೆ. ಕೆರೆ ಸುತ್ತಲೂ ಇಂಟರ್‌ಲಾಕ್ ಅಳವಡಿಸಿ ಆವರಣ ಗೋಡೆ ಕಟ್ಟುವ ಕೆಲಸ ಇನ್ನು ನಡೆಯಬೇಕಾಗಿದೆ. ಸುತ್ತಲೂ ಗಿಡ ಮರಗಳನ್ನು ನೆಡುವ ಯೋಜನೆಯಿದ್ದು, ಗಾರ್ಡನ್ ನಿರ್ಮಿಸುವ ಕಾರ್ಯ ಯೋಜನಾ ಪಟ್ಟಿಯಲ್ಲಿದೆ.

1800 ವರ್ಷ ಇತಿಹಾಸ


ಗುಜ್ಜರ ಕರೆ ಸುಮಾರು 1800 ವರ್ಷ ಪುರಾತನ ಎಂದು ಹೇಳಲಾಗಿದೆ. ನಾಥ ಪಂಥದ ಗೋರಕ್ಷನಾಥರು ತನ್ನ ಗುರು ಮತ್ಸ್ಯೇಂದ್ರನಾಥರಿಗಾಗಿ ಕೆರೆ ನಿರ್ಮಿಸಿದರು ಎಂಬ ಐತಿಹ್ಯವಿದೆ. ಅಂದು ಗುರುಜನರ ಕೆರೆ ಎಂದು ಹೇಳಲಾಗುತ್ತಿದ್ದ ಕೆರೆ ಮುಂದೆ ಗುಜ್ಜರಕೆರೆಯಾಗಿದೆ ಎಂಬುದು ಸ್ಥಳೀಯರ ಅಭಿಪ್ರಾಯ.


ಒಂದು ಕಾಲದಲ್ಲಿ ಕೃಷಿ ಭೂಮಿ ಅಧಿಕವಾಗಿದ್ದ ಈ ಪ್ರದೇಶದ ಕೃಷಿಗೆ ಈ ಕೆರೆಯೇ ಜಲಮೂಲವಾಗಿತ್ತು. ಅಷ್ಟು ಮಾತ್ರವಲ್ಲದೆ ಶ್ರೀಮಂಗಳಾದೇವಿ ಮತ್ತು ಬೋಳಾರ ಶ್ರೀಮಾರಿಗುಡಿಗೆ ಇದೇ ತೀರ್ಥ ಕರೆಯಾಗಿತ್ತು. ಕ್ರಮೇಣ ನೀರು ಕಲುಷಿತಗೊಳ್ಳುತ್ತಿದ್ದಂತೆ ತೀರ್ಥ ಕೆರೆ ಬದಲಾಯಿತು ಎಂದು ಹೇಳಲಾಗುತ್ತಿದೆ.

‘ಗುಜ್ಜರ ಕೆರೆ ಪೇರಾವಡ್’


ತುಳುನಾಡಿನ ಐತಿಹಾಸಿಕ ಪುರುಷ ಅಗೋಳಿ ಮಂಜಣ್ಣನ ಪಾಡ್ದನದಲ್ಲಿ ಉಲ್ಲೇಖವಿರುವಂತೆ ‘ಗಡಾಯಿ ಕಲ್ ಉಡರಿಗೆ ಆವಾಡ್... ಗುಜ್ಜರಕೆರೆ ಪೇರಾವಡ್...’( ಗಡಾಯಿ ಕಲ್ ದೊಡ್ಡ ಗಾತ್ರದ ಕಡುಬು ಆಗಲಿ, ಗುಜ್ಜರ ಕರೆ ಹಾಲಾಗಲಿ), ಇದೀಗ ಆ ಸೊಬಗು ಮತ್ತೆ ಗುಜ್ಜರಕೆರೆಗೆ ಬರಲಿದೆ.


ಅಗೋಳಿ ಮಂಜಣ್ಣನ ಗಾತ್ರಕ್ಕೆ ಅನ್ವರ್ಥವಾಗಿ ಆತ ತಿನ್ನುವ ಭಕ್ಷ್ಯಗಳ ಗಾತ್ರವನ್ನು ಉಲ್ಲೇಖಿಸಲಾಗಿದೆ. ಹಾಗಾಗಿ ಗುಜ್ಜರ ಕೆರೆ ತುಳುನಾಡಿನಲ್ಲಿ ಕಂಡುಬರುವ ದೊಡ್ಡ ಗಾತ್ರದ ಕೆರೆ ಎಂಬುದಾಗಿ ಇತಿಹಾಸಕಾರರು ಅಭಿಪ್ರಾಯಪಡುತ್ತಾರೆ.

ಗುಜ್ಜರ ಕೆರೆಯ ಮೂಲ ಗಾತ್ರ ಎಷ್ಟು ಎಂಬುದು ಪ್ರಸ್ತುತ ಅಂದಾಜಿಲ್ಲದಿದ್ದರೂ, ಈಗಿನ ಸರಕಾರಿ ಲೆಕ್ಕದಂತೆ ಸರ್ವೆ ನಂಬ್ರ 721/1ರಲ್ಲಿ ಸುಮಾರು 3.43 ಎಕರೆ ವಿಸ್ತೀರ್ಣವನ್ನು ಕೆರೆ ವ್ಯಾಪಿಸಿದೆ.

ಮೊದಲ ಪ್ರಯತ್ನ


ಗುಜ್ಜರಕರೆಗೆ ತ್ಯಾಜ್ಯ ತಂದು ಹಾಕುವುದು, ಒತ್ತುವರಿ, ಹೂಳು ತುಂಬಿರುವುದು ಸೇರಿದಂತೆ ಬಹುತೇಕ ಗುಜ್ಜರಕೆರೆ ನಾಮಾವಶೇಷದ ಹಂತ ತಲುಪಲಿದ್ದ ಸಂದರ್ಭ ಸ್ಥಳೀಯರು ಒಟ್ಟಾಗಿ ‘ಗುಜ್ಜರ ಕರೆ ತೀರ್ಥ ಸಂರಕ್ಷಣಾ ವೇದಿಕೆ’ ಎಂಬ ಬಳಗವನ್ನು ಸ್ಥಾಪಿಸಿ 2001ರ ಜ.17ರಂದು ಮಹಾನಗರ ಪಾಲಿಕೆ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಯಾವುದೇ ಪ್ರಗತಿ ಕಾಣದಿದ್ದಾಗ 2002ರಲ್ಲಿ ಸಚಿವ ಕೃಷ್ಣ ಜೆ.ಪಾಲೆಮಾರ್(ಅಂದು ಉದ್ಯಮಿ) ಅವರ ಸಹಕಾರದಲ್ಲಿ ಹೂಳೆತ್ತುವ ಕಾರ್ಯವನ್ನು ವೇದಿಕೆ ಕೈಗೊಂಡಿತ್ತು. 225 ಮಂದಿಯ ಸಹಕಾರದಲ್ಲಿ 25 ಅಡಿ ಹೂಳೆತ್ತಲಾಯಿತಾದರೂ, ಮಳೆಯ ಕಾರಣದಿಂದ ಅಂದು ಕಾಮಗಾರಿ ಸ್ಥಗಿತಗೊಂಡಿತ್ತು. ಕಾಮಗಾರಿಗಾಗಿ ಸರಕಾರದಿಂದ 5.5 ಲಕ್ಷ ರೂ. ಅನುದಾನ ಲಭಿಸಿತ್ತು. ಇದೀಗ ಸರಕಾರದಿಂದ ಲಭಿಸಿದ ಅನುದಾನದಲ್ಲಿ ಗುಜ್ಜರಕೆರೆ ಅಭಿವೃದ್ಧಿಯನ್ನು ಕಾಣುವಂತಾಗಿದೆ.


ಬೆಳ್ಳಕಿಗಳ ಹಿಂಡು ಬೀಡುಬಿಟ್ಟಿರುವುದು.
ಕಳೆದ ವರ್ಷ ನಡೆದ ಮೊದಲ ಹಂತದ ಕಾಮಗಾರಿ ಬಳಿಕ ಬೇಸಿಗೆಯಲ್ಲೂ ಕೆರೆಯಲ್ಲಿ ನೀರು ತುಂಬಿ ತುಳುಕುವಂತಾಗಿತ್ತು. ಬೆಳ್ಳಕ್ಕಿಗಳ ಹಿಂಡು ಕೆರೆಯ ಸುತ್ತಮುತ್ತ ಬೀಡುಬಿಟ್ಟಿದ್ದು, ಆಹಾರಕ್ಕಾಗಿ ಕೆರೆಯನ್ನು ಅವಲಂಬಿಸಿತ್ತು. ಬೆಳಗ್ಗೆ- ಸಂಜೆ ವಾಯು ವಿಹಾರಕ್ಕೆ ಆಗಮಿಸುವವರಿಗೆ ಕೂಡಾ ಮನೋಹರ ತಾಣವಾಗಿತ್ತು. ಇದೀಗ ಅಭಿವೃದ್ಧಿ ಕಾರ್ಯ ಪ್ರಗತಿಯಲ್ಲಿದ್ದು, ಪ್ರವಾಸಿ ತಾಣವಾಗಿ ಮೂಡಿಬರಲಿದೆ.