ರುದ್ರಭೀಮನ ರೌದ್ರಾವತಾರ






ಪಗಡೆಯಾಟಕ್ಕೆ ಸಂಚು
ಪಗಡೆಯಾಟ
ದ್ರೌಪದಿ ರೋಧನ
ಧರ್ಮರಾಯನಲ್ಲಿ ಬಿನ್ನಹ
ಕೃಷ್ಣನಿಗೆ ಮೊರೆ
ಕೃಷ್ಣ ಸಂಧಾನ
ಧುರ್ಯೋಧನ
ರುಧ್ರಭೀಮ
ಭೀಮ-ದುಶ್ಶಾಸನ ಯುದ್ಧ
ದುಶ್ಶಾಸನ ವಧೆ







ಮಂಗಳೂರಿನಲ್ಲೊಂದು ಕಥಕ್ಕಳಿ ಸಂಜೆ

ಅಲ್ಲಿ ಪಾತ್ರಗಳ ನಡುವೆ ಮೌಖಿಕ ಸಂಭಾಷಣೆಯಿಲ್ಲ. ಆದರೆ ಸುಂದರ ಕಥೆಯೊಂದರ ನಿರೂಪಣೆಯಿತ್ತು. ಕಾರಣ ಮುಖವರ್ಣಿಕೆ ಅರ್ಥ ಹೇಳುತ್ತಿತ್ತು. ಆಂಗಿಕ ಅಭಿನಯ ಮೌನ ಸಂಭಾಷಣೆ ನಡೆಸುತ್ತಿತ್ತು. ಮುಖದ ಮೇಲಿನ ಹಾವ ಭಾವ ಸಂತೋಷ- ದುಃಖ ಎಲ್ಲವನ್ನೂ ವ್ಯಕ್ತಪಡಿಸುತ್ತಿತ್ತು. ಹೆಜ್ಜೆ- ಗೆಜ್ಜೆಗಳ ಸದ್ದು ಒಂದು ಗುಂಗನ್ನೇ ಸೃಷ್ಟಿಸಿತ್ತು. ಚೆಂಡೆ- ಮದ್ದಲೆಯ ಝೇಂಕಾರ ಲಯವನ್ನೇ ಮೂಡಿಸಿತ್ತು. ಎಲ್ಲಕ್ಕೂ ಮಿಗಿಲಾಗಿ ಇಬ್ಬರು ಪಾಟ್ಟು ಕಲಾವಿದರ ಹಾಡುಗಾರಿಕೆ ಕಥೆಯನ್ನು ನವಿರಾಗಿ ಹೇಳುತ್ತಿತ್ತು...
ಹೌದು ಇದು ಕಥಕ್ಕಳಿ. ಕರಾವಳಿಯ ಯಕ್ಷಗಾನದಂತೆ ಕಂಡರೂ, ಮೌಖಿಕ ಸಂಭಾಷಣೆಯಿಲ್ಲದ, ಕೇವಲ ಹಾಡುಗಾರಿಕೆ ಮತ್ತು ಆಂಗಿಕ ಅಭಿನಯದ ಮೂಲಕ ರೂಪಕವೊಂದನ್ನು ಪ್ರಸ್ತುತಪಡಿಸಿದ ಕಥಕ್ಕಳಿಯಿದು.
ಕಲ್ಕೂರ ಪ್ರತಿಷ್ಠಾನ, ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಮಂಗಳೂರಿನ ಪುರಭವನದಲ್ಲಿ ಕೇರಳ ಕಲಾಮಂಡಲಂನ ಕಾವಂಗಲ್‌ ಕಥಕ್ಕಳಿ ಯೋಗಂ ವತಿಯಿಂದ `ದುಶ್ಶಾಸನ ವಧಾ' ಎಂಬ ಕಥಕ್ಕಳಿ ರೂಪಕ ನಡೆಯಿತು.
ಸಭಾಂಗಣದಲ್ಲಿ ನೆರದಿದ್ದ ಕೆಲವರು ಕಥಕ್ಕಳಿ ರೂಪಕವನ್ನು ಪ್ರಥಮ ಬಾರಿಗೆ ಆಸ್ವಾದಿಸುತ್ತಿದ್ದರು. ಮಲೆಯಾಳಿ ಭಾಷಿಕರು ಅಲ್ಲಿ ಕುತೂಹಲದಿಂದ ನೆರೆದಿದ್ದರು. ಮಹಾಭಾರತದ ಕಥೆ ಗೊತ್ತಿದ್ದ ಕಾರಣ ಕಥೆಯು ಅರ್ಥವಾಗುತ್ತಿತ್ತು. ಆದರೆ ಮಲೆಯಾಳಂ ಭಾಷೆಯ ಅರಿವಿಲ್ಲದ ಕಾರಣ ಪಾಟ್ಟು(ಹಾಡುಗಾರಿಕೆ) ಅರ್ಥವಾಗುತ್ತಿರಲಿಲ್ಲ. ಆದರೆ ಸಂಗೀತದ ಮಾಧುರ್ಯ ಮಂತ್ರಮುಗ್ಧರನ್ನಾಗಿಸಿತ್ತು. ಒಟ್ಟಾರೆ ಕಥಕ್ಕಳಿ ಪ್ರದರ್ಶನ ಮನಸೂರೆಗೊಂಡಿತ್ತು.
ಪಾಂಡವ- ಕೌರವರ ನಡುವೆ ಪಗಡೆಯಾಟದಿಂದ ಪ್ರಾರಂಭವಾಗುವ ರೂಪಕ, ದ್ರೌಪದಿ ವಸ್ತ್ರಾಪಹರಣ, ಕೃಷ್ಣ ಸಂಧಾನ, ವಿಶ್ವರೂಪ ದರ್ಶನ ಹಾಗೂ ದುಶ್ಶಾಸನ ವಧೆ ವರೆಗೆ ಸಾಗಿತ್ತು. ಪಗಡೆಯಾಡುವಾಗ ಧರ್ಮರಾಯ, ಧುರ್ಯೋಧನ, ದುಷ್ಯಾಸನ, ಶಕುನಿ ಇವರ ಆಂಗಿಕ ಅಭಿನಯ, ಸೋಲುವಾಗ ಧರ್ಮರಾಯನ ಮ್ಲಾನ ವದನ, ಪಾಂಚಾಲಿಯನ್ನು ಎಳೆದು ತರುವಾಗ ಆಕೆಯ ಮುಖದಲ್ಲಿನ ಹಾವಭಾವಗಳು ಪ್ರೇಕ್ಷಕರ ನಡುವೆ ಮೌನ ಸಂಭಾಷಣೆ ನಡೆಸುತ್ತಿತ್ತು.
ಕೃಷ್ಣನ ಬಳಿ ಪಾಂಚಾಲಿ ತನ್ನ ಸಂಕಷ್ಟವನ್ನು ತೋಡಡಿಕೊಂಡ ರೀತಿ, ಕೃಷ್ಣ ಸಂಧಾನದ ಸಂದರ್ಭ ಒಂದು ಸೂಜಿ ಮೊನೆಯಷ್ಟು ಜಾಗವನ್ನು ಕೊಡಲಾರೆ ಎಂದು ಧುರ್ಯೋಧನ ಹೇಳಿದಂತಹ ರೀತಿ, ವಿಶ್ವರೂಪ ದರ್ಶನ ಎಲ್ಲವೂ ಕಣ್ಣಿಗೆ ಕಟ್ಟಿತ್ತು.
ರುದ್ರಭೀಮನ ಆ‌ಗಮನ ಹಾಗೂ ದುಶ್ಶಾಸನನ ನಡುವಿನ  ಮೌನ ಸಂಭಾಷಣೆಯೂ ಅಷ್ಟೇ... ನೀನು ತಿನ್ನಲಿಕ್ಕೆ ಲಾಯಕ್ಕು, ಬೇರೇನು ನಿನ್ನಿಂದ ಸಾಧ್ಯವಿಲ್ಲ ಎಂಬ ಮೂದಲಿಕೆಯನ್ನು ದುಶ್ಶಾಸನ ಕೇವಲ ತನ್ನ ಆಂಗಿಕ ಅಭಿನಯದ ಮೂಲಕ ತೋರ್ಪಡಿಸಿದ್ದು ಪ್ರೇಕ್ಷಕರ ಮನದಲ್ಲಿ ಅಚ್ಚೊತ್ತಿತ್ತು.
ರುದ್ರಭೀಮ ಕೊನೆಗೆ ದುಶ್ಶಾಸನನ ಹೊಟ್ಟೆ ಬಗೆದು ಕರುಳನ್ನು ಕಿತ್ತು ದ್ರೌಪದಿಯ ಮುಡಿಯನ್ನು ಕಟ್ಟುವಲ್ಲಿಗೆ ಕಥಕ್ಕಳಿ ರೂಪಕ ಪೂರ್ಣ ವಿರಾಮ ಹಾಕಿತ್ತು. ಸಭಾಂಗಣದಿಂದ ಹೊರ ನಡೆಯುವಾಗ ಚೆಂಡೆ ಮದ್ದಲೆ ಸದ್ದು ಹಾಗೂ ಮುಖವರ್ಣಿಕೆ ಮಾತ್ರ ಮನಸ್ಸಿನಲ್ಲಿ ಗುಂಗುನಿಸುತ್ತಿತ್ತು.
ಮುಮ್ಮೇಳದಲ್ಲಿ ದುಷ್ಯಾಸನ- ಕಾವಂಗಲ್‌ ದಿವಾಕರ ಪಣಿಕ್ಕರ್‌, ದುರ್ಯೋಧನ- ಸದನಂ ಕೃಷ್ಣದಾಸ್‌, ಶಕುನಿ- ಸದನಂ ಸುರೇಶ್‌, ಧರ್ಮರಾಯ- ಸದನಂ ಸದಾನಂದನ್‌, ಪಾಂಚಾಲಿ- ಕಲಾಮಂಡಲಂ ಶಿವದಾಸನ್‌, ಶ್ರೀಕೃಷ್ಣ- ಸದನಂ ವಿಜಯನ್‌, ರುದ್ರಭೀಮ- ಕಲಾನಿಲಯಂ ಬಾಲಕೃಷ್ಣನ್‌ ಪಾತ್ರ ನಿರ್ವಹಿಸಿದ್ದರು.
ಹಿಮ್ಮೇಳದಲ್ಲಿ ಹಾಡುಗಾರಿಕೆ- ಕಲಾಮಂಡಲಂ ಅಚ್ಯುತನ್‌ ಮತತು ಸದನಂ ಶಿವದಾಸನ್‌, ಚೆಂಡೆ- ಕಲಾಮಂಡಲಂ ಶ್ರೀಕಾಂತ್‌ ವರ್ಮ ಮತ್ತು ಸದನಂ ಶ್ರೀಹರಿ, ಮದ್ದಲೆ- ಕಲಾನಿಲಯಂ ಶಂಕರದಾಸ್‌ ಮತ್ತು ಕಲಾಮಂಡಲಂ ಪ್ರವೀಣ್‌ ಸಹಕರಿಸಿದರು.
ಬಣ್ಣಗಾರಿಕೆಯಲ್ಲಿ ಕೈಯಡಂ ನೀಲಕಂಠನ್‌ ನಂಬೂದರಿ ಮತ್ತು ಕಲಾನಿಲಯಂ ಜನಾರ್ದನನ್‌, ನೇಪಥ್ಯದಲ್ಲಿ ಶಂಕರನಾರಾಯಣನ್‌, ಕುಮಾರನ್‌, ರಾಜು, ಉಡುಗೆತೊಡುಗೆಯಲ್ಲಿ ಪೂಮಳ್ಳಿ ಮನ ಸಹಕಾರ ನೀಡಿದರು.
ಸಭಾ ಕಾರ್ಯಕ್ರಮದಲ್ಲಿ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಕುಂಬ್ಳೆ ಸುಂದರ್‍ ರಾವ್‌ ಅಧ್ಯಕ್ಷತೆ ವಹಿಸಿದ್ದರು. ಶಾರದಾ ವಿದ್ಯಾಲಯದ ಪ್ರಾಂಶುಪಾಲರಾದ ಡಾ.ಲೀಲಾ ಉಪಾಧ್ಯ ಉದ್ಘಾಟಿಸಿದರು. ನ್ಯಾಯವಾದಿ ಎ.ಎಸ್‌.ಎನ್‌.ಹೆಬ್ಬಾರ್‌, ಪ್ರೊ.ಎ.ವಿ.ನಾವಡ ಉಪಸ್ಥಿತರಿದ್ದರು. ಕದ್ರಿ ನವನೀತ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್‌ ಕುಮಾರ್‌ ಕಲ್ಕೂರ ವಂದಿಸಿದರು. ಈ ಸಂದರ್ಭ ಕಲಾವಿದ ಕಾವಂಗಲ್‌ ದಿವಾಕರ ಪಣಿಕ್ಕರ್ ಅವರನ್ನು ಸನ್ಮಾನಿಸಲಾಯಿತು.