ಎರಡೂವರೆ ವರ್ಷದ ಬಳಿಕ ಕಾಡಿದ ನೆನಪು
ಅದೊಂದು ಮಳೆಗಾಲದ ದಿನ. ಬೆಳ್ಳಂಬೆಳಗ್ಗೆ ಫೋನ್ ರಿಂಗಿಣಿಸಿತು. ಅತ್ತ ಕಡೆಯಿಂದ "ನಮ್ಮ ಮನೆಯ ಆವರಣದಲ್ಲೊಂದು ಅಪರೂಪದ ಹೂ ಅರಳಿದೆ. ಕಾಶ್ಮೀರದ ಕಣಿವೆಗಳಲ್ಲಿ ಕಾಣುವಂತಹ ಹೂವಿಂತಿದ್ದು, ಬಲು ಸುಂದರವಾಗಿದೆ" ಎಂದು ಆರೂರಿನ ಕೆ.ವಿ.ಶೆಟ್ಟಿ ಎಂಬವರು ಹೇಳಿದಾಗ ಆ ಹೂ ಎಂತದ್ದು ಎಂಬ ಆಸೆಯೊಂದಿಗೆ ಹೂ ನೋಡಲು ರೆಡಿಯಾಗಿಬಿಟ್ಟಿದೆ.
ಆಗ ನಾನು ಉಡುಪಿಯಲ್ಲಿ ವರದಿಗಾರನಾಗಿದ್ದೆ. ತಕ್ಷಣ ಮಿತ್ರ, ಛಾಯಾಚಿತ್ರಗ್ರಾಹಕ ಜನಾರ್ದನ ಕೊಡವೂರು ಅವರಿಗೆ ಆ ಹೂವನ್ನು ನೋಡಲು ಹೋಗೋಣ ಎಂದು ಹೇಳಿ ಬೈಕ್‌ನಲ್ಲಿ ಹೊರಟೇ ಬಿಟ್ಟೆವು. ಉಡುಪಿಯಿಂದ ಹೊರಡುವಾಗ ಆರೂರಿನ ಶೆಟ್ಟರ ಮನೆ ಎಷ್ಟು ದೂರ ಎಂಬುದರ ಅರಿವಿರಲಿಲ್ಲ. ಆದರೆ, ಬ್ರಹ್ಮಾವರದಿಂದ ಒಳಕ್ಕೆ ತಿರುಗಿ ಕೆ.ವಿ.ಶೆಟ್ಟರ ಮನೆಯನ್ನು ಹುಡುಕುತ್ತಾ ಹೋದಂತೆ ಆ ಮನೆ ಬಹಳಷ್ಟು ದೂರ ಎಂಬುದರ ಅರಿವಾಗುತ್ತಾ ಬಂತು. ಆದರೂ, ಆ ಹೂವನ್ನು ನೋಡಬೇಕೆಂಬ ಉತ್ಕಟ ಆಸೆಯೊಂದಿಗೆ ಅಲ್ಲಿಗೆ ಹೊರಟ ನಾವು ಹೂವನ್ನು ನೋಡದೆ ಹಿಂದಿರುಗಲಾರೆವು ಎಂಬ ಅಭಿಲಾಷೆಯೊಂದಿಗೆ ಕೊನೆಗೂ ಅವರ ಮನೆಯನ್ನು ತಲುಪಿದೆವು.
ಅವರು ರಿಟೈರ್‍ಡ್‌ಮಿಲ್ಟ್ರಿಮೆನ್. ಸೇನೆಯಲ್ಲಿ ರಿಟೈರ್‍ಡ್ ಆದ ಬಳಿಕ ಮಂಗಳೂರಿನಲ್ಲಿ ವಿಜಯಾ ಬ್ಯಾಂಕ್ ಶಾಖೆಯಲ್ಲಿ ವೃತ್ತಿ ನಿರ್ವಹಿಸಿ ವಿಶ್ರಾಂತ ಜೀವನ ನಡೆಸುತ್ತಿದ್ದರು. ನಾವು ನಮ್ಮ ಪರಿಚಯ ಹೇಳಿ ಹೂವನ್ನು ತೋರಿಸಲು ಹೇಳಿದೆವು. ಆದರೆ ಅಪರೂಪದ ಹೂವನ್ನು ನೋಡಬೇಕೆಂಬ ಆಸೆಯೊಂದಿಗೆ ಹೊರಟ ನಮಗೆ ತಣ್ಣೀರೆರಚಿದಂತಾಯಿತು. ಕಾರಣ... ಅದೊಂದು ಸಾಮಾನ್ಯ ಥಂಡರ್ ಲಿಲ್ಲಿ. ನಮ್ಮ ಮನೆಯಂಗಳದಲ್ಲಿಪ್ರತಿ ವರ್ಷ ಮಳೆಗಾಲದಲ್ಲಿ ಟಿಸಿಲೊಡೆವ ಥಂಡರ್ ಲಿಲ್ಲಿಯನ್ನು ಚಿಕ್ಕಂದಿನಿಂದಲೂ ನೋಡಿದ್ದ ನನಗೆ ಅದೊಂದು ಅಪರೂಪದ ಹೂವಾಗಿ ಕಾಣಲಿಲ್ಲ. ಆದರೆ ಅವರ ತೋಟದಲ್ಲಿ ಪ್ರಥಮ ಬಾರಿಗೆ ಅರಳಿದ ಥಂಡರ್ ಲಿಲ್ಲಿ ಅವರಿಗೆ ಅಪರೂಪದ ಹೂವಾಗಿ ಕಂಡಿತ್ತು. ಇಳಿ ವಯಸ್ಸಿನಲ್ಲೂ ಅವರ ಉತ್ಸಾಹ ಕಂಡು ನಮಗೆ ಖುಷಿಯಾಗಿತ್ತು. ಹೋದ ದಾರಿಗೆ ಸುಂಕವಿಲ್ಲ ಎಂದೆನಿಸಿದರೂ, ಹೊಸ ವ್ಯಕ್ತಿಯೊಬ್ಬರ ಪರಿಚಯ ನಮಗಾಯ್ತಲ್ಲ ಎಂದು ಕೊಂಡು ಅವರ ವೃತ್ತಿ ಜೀವನದ ಕಥೆಯನ್ನು ಸುಮಾರು ಅರ್ಧ ಗಂಟೆಗಳ ಕಾಲ ಕೇಳಿದೆವು. ಅವರ ಮಿಲಿಟರಿ ಹಾಗೂ ಬ್ಯಾಂಕ್ ಜೀವನದ ಅನುಭವಗಳನ್ನು ಹೇಳಿ ನಮಗೊಂದು ಕಾಫಿ ಕೊಟ್ಟು ಬೀಳ್ಕೊಟ್ಟರು. ಆದರೆ ಅವರು ನಮ್ಮನ್ನು ಬರಿಗೈಯಲ್ಲಿ ಕಳಿಸಲಿಲ್ಲ. ಮನೆಯ ತೋಟದಲ್ಲಿ ಆಗ ತಾನೆ ಹಣ್ಣಾಗಿದ್ದ ಎರಡು ಅನಾನಾಸುಗಳನ್ನು ಕೊಟ್ಟು ಕಳಿಸಿದರು. ಅವೆರಡು ಹಣ್ಣುಗಳ ಜತೆಗೆ ಅವರ ಬದುಕಿನ ಅನುಭವ ಕಥನಗಳನ್ನು ಮೆಲುಕು ಹಾಕುತ್ತಾ ಅಲ್ಲಿಂದ ಹೊರಟೆವು.
ಈ ಘಟನೆ ನಡೆದು ಎರಡೂವರೆ ವರ್ಷದ ಬಳಿಕ ಮತ್ತೆ ನೆನಪಾದದ್ದು, ಅನಾನಾಸು ತಿನ್ನುವಾಗ. ಅಂದ ಹಾಗೆ ಆ ಅನಾನಾಸು ಅವರು ಕೊಟ್ಟ ಅನಾನಾಸಿನ ಜುಟ್ಟಿನಿಂದ ನೆಟ್ಟ ಗಿಡದ್ದು ! ಅವರು
ಅಂದು ಕೊಟ್ಟ ಅನಾನಸು ತಿಂದು ಅದರ ಮೇಲಿನ ಜುಟ್ಟನ್ನು ಮನೆಯ ಆವರಣದಲ್ಲಿ ನೆಟ್ಟಿದ್ದೆ. ಅದು ದೊಡ್ಡದಾಗಿ ಹೂಬಿಟ್ಟು, ಕಾಯಾಗಿ ಹಣ್ಣಾಗಿದೆ. ಹಣ್ಣು ತಿಂದಾಗ ಈ ಎಲ್ಲ ನೆನಪುಗಳು ಮರುಕಳಿಸಿತು. ಮಿತ್ರ ಜನಾರ್ದನ ಕೊಡವೂರು ಅವರಿಗೂ ಅನಾನಾಸಿನ ಬಗ್ಗೆ ಹೇಳಿ ಅನಾನಾಸಿನ ಫೋಟೋ ತೆಗೆದು ಮೇಲ್ ಮಾಡಿದ್ದೆ. ಅವರಿಗೂ ಈ ಕಥೆ ಒಂದು ಮರೆಯಲಾರದ ಘಟನೆಯಾಗಿ ಇನ್ನೂ ನೆನಪಿದೆ.
ಅಂದ ಹಾಗೆ ಆರೂರಿನಿಂದ ಬಂದ ಎರಡು ದಿನದ ಬಳಿಕ ಜನಾರ್ದನ ಅವರ ಮೊಬೈಲ್ ರಿಂಗಿಣಿಸಿತ್ತು. ಯಾಕೆ ಗೊತ್ತೆ...? ಅವರ ಗೆಳೆಯರೊಬ್ಬರು ಮನೆಗೆ ಬರಲು ತಿಳಿಸಿದ್ದರು. ಕಾರಣ ಹೇಳಿರಲಿಲ್ಲ. ಅವರು ತಕ್ಷಣ ಹೊರಟು ಬಿಟ್ಟಿದ್ದರು. ಅಲ್ಲಿ ಹೋದರೆ ಅವರು ಕರೆದದ್ದು ಅದೇ `ಅಪರೂಪ'ದ ಹೂವಿನ ಫೋಟೋ ತೆಗೆಯಲೆಂದು !
Subscribe to:
Posts (Atom)