ಕಿರುಬೆರಳ ಪ್ರವರ

ಕಿರುಬೆರಳು... ಕೃಷ್ಣನೆತ್ತಿದ ಗೋವರ್ಧನಗಿರಿ
ಫೋಟೋ ಕ್ಲಿಕ್ಕಿಸುವಾಗ ಯಾವಾಗಲೂ ಅನ್ನಿಸುತ್ತಿತ್ತು. ಅವೆಲ್ಲವನ್ನೂ ಬ್ಲಾಗ್‌ನಲ್ಲಿ ಹಾಕಿಬಿಡಬೇಕು. ಆದಷ್ಟು ಬೇಗನೇ ಒಂದು ಬ್ಲಾಗ್ ರೂಪಿಸಿ ಕ್ಲಿಕ್ಕಿಸಿದ ಫೋಟೋಗಳನ್ನು ಅದರಲ್ಲಿಹಾಕಿ ಎಲ್ಲರೂ ವೀಕ್ಷಿಸುವಂತೆ ಮಾಡಬೇಕು ಎಂಬ ಆಸೆಯಿತ್ತು. ಈ ಅಭಿಲಾಷೆ ಈಗ ನೆರವೇರಿದೆ.
ಕಿರುಬೆರಳು ಎಂಬ ಹೆಸರಿನ ಬ್ಲಾಗ್ ಪ್ರಾರಂಭಿಸುವಾಗ ಎಲ್ಲರದ್ದೂ ಒಂದೇ ಪ್ರಶ್ನೆ... ಕಿರುಬೆರಳು ಅಂದರೆ ಏನು? ಆಗ ನಾನು ಬ್ಲಾಗ್‌ನ ಮೇಲ್ಭಾಗದಲ್ಲಿ ಪ್ರಸ್ತುತ ಇರುವ ಚಿತ್ರ ಹಾಕಿರಲಿಲ್ಲ. ಹಾಗಾಗಿ ಎಲ್ಲರಿಗೂ ಒಂದೇ ಉತ್ತರ ಕೊಟ್ಟಿದ್ದೆ. ಕಾದು ನೋಡಿ...
ಸಹೋದ್ಯೋಗಿ ಮಿತ್ರ ಆಂಟನಿರಾಜ್ ಡಿಸಾನ್ ಮಾಡಿದ ಹೆಡ್ಡರ್ ಬ್ಲಾಗ್‌ನ ಮೇಲ್ಭಾಗದಲ್ಲಿರುವುದರಿಂದ ಈ ಪ್ರಶ್ನೆಗೆ ಎಲ್ಲರಿಗೂ ಈಗ ಉತ್ತರ ದೊರಕಿದೆ.
ಬ್ಲಾಗ್ ಪ್ರಾರಂಭಿಸುವ ಮೊದಲು ಅದಕ್ಕೊಂದು ಸುಂದರ ಹೆಸರನ್ನಿಡಬೇಕು ಎಂದು ನಾನು ನನ್ನ ಮನದನ್ನೆ ಬಹಳಷ್ಟು ದಿನಗಳಿಂದ ತಿಣುಕಾಡುತ್ತಿದ್ದಾಗ ಪಕ್ಕನೆ ಹೊಳೆದ ಹೆಸರಿದು. ಸರಿ ಅದೇ ಹೆಸರಿನಲ್ಲಿ ಬ್ಲಾಗ್ ಪ್ರಾರಂಭಿಸಿಯೇ ಬಿಟ್ಟೆ. ಮೊದಲು ಒಂದೆರೆಡು ಫೋಟೋಗಳನ್ನು ಅಪ್‌ಲೋಡ್ ಮಾಡಿದ ಬಳಿಕ ಗೆಳೆಯರೆಲ್ಲರಿಗೂ ಬ್ಲಾಗ್ ಪ್ರಾರಂಭಿಸಿರುವ ವಿಷಯ ತಿಳಿಸಿದೆ. ಆಗ ಕೇಳಿ ಬಂದದ್ದು ಅದೇ ಪ್ರಶ್ನೆ... ಕಿರುಬೆರಳು ಅಂದರೆ ಏನು? ಕಾದು ನೋಡಿ ಎಂದವರಿಗೆ ಈಗ ಉತ್ತರ ದೊರಕಿದೆ.
ಈ ಹೆರನ್ನಿಟ್ಟ ಹಿಂದಿನ ಕಥೆ, ಕಿರುಬೆರಳಿನ ಬಗ್ಗೆ ನನ್ನ ಕಲ್ಪನೆ, ಆಶಯಗಳನ್ನು ಬರೆದರೆ ಒಳ್ಳೆಯದಲ್ಲವೇ...! ಅದಕ್ಕಾಗಿಯೇ ಈ ಪ್ರವರ.
ಅದೇ ಅಂಗೈಯನ್ನೊಮ್ಮೆ ನೋಡಿ... ಪುಟ್ಟದಾಗಿ ಕಾಣುವ ಕಿರುಬೆರಳು ನಾನೆಲ್ಲರಿಗಿಂತ ಕಿರಿಯವ ಎಂದು ಹೇಳುತ್ತಿದೆಯಲ್ಲವೇ...! ಹಾಗೆಯೇ ನಾನು ಇಲ್ಲಿ ಹೇಳ ಹೊರಟಿರುವುದು ಅದೇ. ನಾನು ಇನ್ನೂ ಕಿರಿಯವ ಎಂದಾಗ ಅಲ್ಲಿ ಕಲಿಯಲು ಮತ್ತಷ್ಟು ಅವಕಾಶಗಳು, ಬೆಳೆಯಲು ಇನ್ನಷ್ಟು ಮಜಲುಗಳು ನಮ್ಮ ಮುಂದೆ ತೆರಯುತ್ತಾ ಸಾಗುತ್ತದೆ. ಅದೇ ನಾನು ಎಲ್ಲರಿಗಿಂತ ಹಿರಿಯವ ಎಂದಾಗ ಅಲ್ಲಿ ಮುಂದೆ ಬೆಳೆಯುವ ಅವಕಾಶ ಅಲ್ಲಿಗೆ ಕುಂಠಿತವಾಗಿ ಬಿಡುತ್ತದೆ. ಅದಕ್ಕೆ ಕಿರುಬೆರಳು ಇಷ್ಟವಾಯಿತು.
ಎಲ್ಲದಕ್ಕಿಂತಲೂ ಮಿಗಿಲಾಗಿ ಕೃಷ್ಣ ಕಿರುಬೆರಳಿನಲ್ಲಿ ಗೋವರ್ಧನ ಗಿರಿಯನ್ನು ಎತ್ತಿದ ಕಥೆ ಮತ್ತಷ್ಟು ರೋಚಕವೆನಿಸಿತು. ಕಿರುಬೆರಳಿನ ಸಾಮರ್ಥ್ಯ ಅದೆಷ್ಟು ಎಂಬುದರ ಅರಿವಾಯಿತು.
ಪುಟ್ಟ ಮಗುವಿನ ಕಿರುಬೆರಳು ಹಾಗೂ ಆ ಮಗು ಅಮ್ಮನ ಕಿರುಬೆರಳನ್ನು ಹಿಡಿದಾಗ ಅಲ್ಲಿರುವ ಆತ್ಮೀಯತೆ ಎಲ್ಲವೂ ಸುಂದರ... ಅದಕ್ಕಾಗಿಯೇ ಬ್ಲಾಗ್‌ನ ಹೆಸರು ಕಿರುಬೆರಳು...