ಬಲೆಯಲ್ಲವಿದು... ಕಲೆಯ ಆಗರ

ಮನೆಯಲ್ಲಾ ಬಲೆ ತುಂಬಿದೆ. ಕ್ಲೀನ್ ಮಾಡೋಕಾಗಾಲ್ವ... ಎಂದು ಅಮ್ಮ ಪ್ರತಿ ಬಾರಿ ಹೇಳಿದಾಗಲೂ, ಪಾಪ ಅಷ್ಟು ಕಷ್ಟಪಟ್ಟು ಜೇಡ ಬಲೆ ಕಟ್ಟೊತ್ತೆ ಯಾಕಮ್ಮ ಅದನ್ನು ತೆಗೆಯೋದು ಅಂತ ಹೇಳಿಕೊಂಡು ಬಲೆಕೋಲು ಹಿಡಿದು ಪ್ರತಿಬಾರಿಯೂ ಸ್ವಚ್ಛಗೊಳಿಸಿಬಿಟ್ಟಿದ್ದೇನೆ. ಆದರೆ ಜೇಡ ಮಾತ್ರ ಛಲ ಬಿಡದ ವಿಕ್ರಮನಂತೆ ಎಷ್ಟು ಬಾರಿ ಬಲೆ ತೆಗೆದರೂ ಮತ್ತೆ ಮತ್ತೆ ಬಲೆ ಕಟ್ಟಿ ನನಗೊಂದಿಷ್ಟು ಕೆಲಸ ಕೊಟ್ಟುಬಿಟ್ಟಿದೆ.

ಕುತೂಹಲ ತಡೆಯಲಾಗದೆ ಒಂದು ದಿನ ಜೇಡ ಬಲೆ ಕಟ್ಟುವ ಕಾಯಕವನ್ನು ನೋಡಿದಾಗ ಮಾತ್ರ ಅದ್ಭುತ ಎಂಬ ಮಾತು ತನ್ನಿಂದ ತಾನೇ ಅಮ್ಮನ ಬಾಯಿಯಿಂದ ಹೊರಬಿತ್ತು.
 

ಜೇಡ ಬಲೆ ನೇಯುವ ಕಲೆಗೆ ಮಾತ್ರ ತಲೆದೂಗಲೇ ಬೇಕು. ಅಳತೆಗೋಲಿಲ್ಲ, ತ್ರಿಜ್ಯ, ಜ್ಯಾಮಿತಿಯ ಲೆಕ್ಕಾಚಾರವಿಲ್ಲ, ಯಂತ್ರೋಪಕರಣವಂತೂ ಇಲ್ಲವೇ ಇಲ್ಲ ಬಿಡಿ! ಆದರೂ, ನೇಕಾರ ಬಟ್ಟೆ ನೇಯುವಂತೆ ನಯವಾಗಿ, ಅಳತೆಗೆ ತಕ್ಕಂತೆ ವೃತ್ತಾಕಾರದಲ್ಲಿ ಜೇಡ ತನ್ನ ಬಲೆಯನ್ನು ಸುಂದರವಾಗಿ ಹಣೆದುಬಿಟ್ಟಿರುತ್ತದೆ. 

ತನ್ನ ಆಹಾರವನ್ನು `ಬಲೆ'ಗೆ ಹಾಕಿಕೊಳ್ಳಲು ಹೆಣೆಯುವ ಈ ಬಲೆ ಜೇಡನ ಕಲಾಗಾರಿಕೆಗೆ ಸಾಕ್ಷಿ. ಸೂಕ್ತ ಜಾಗವನ್ನು ಆಯ್ಕೆ ಮಾಡಿ ನಾಲ್ಕೈದು ಮೂಲೆಗೆ ಉದ್ದಕ್ಕೆ ತನ್ನ ದೇಹದಿಂದ ಸ್ರವಿಸುವ ಅಂಟು ಪದಾರ್ಥವನ್ನು ನೂಲಿನಂತೆ ಮಾಡಿ ತನ್ನದೇ ಆದ ಪಂಚಾಂಗವನ್ನು ರೂಪಿಸಿಬಿಡುತ್ತದೆ. ಬಳಿಕ ಚಕ್ರಾಕೃತಿಯಲ್ಲಿ ಒಂದೇ ಸಮನಾದ ಅಂತರದಲ್ಲಿ ಬಲೆ ಹೆಣೆಯಲು ಪ್ರಾರಂಭಿಸುತ್ತದೆ. 

ಚಕ್ರವ್ಯೂಹದಂತೆ ಬಲೆಯನ್ನು ಹೆಣೆದ ಬಳಿಕ ಮಧ್ಯೆ ಹೋಗಿ ಕುಳಿತುಬಿಡುವ ಜೇಡ ಮಿಕ ಬಲೆಗೆ ಬೀಳುವುದನ್ನೇ ಕಾಯುತ್ತಿರುತ್ತದೆ. ಸಣ್ಣಪುಟ್ಟ ಹಾತೆ, ಕ್ರಿಮಿಗಳು ಬಲೆಗೆ ಬಿದ್ದ ತಕ್ಷಣ ಅಲ್ಲಿಗೆ ಧಾವಿಸಿ ಅವನ್ನು ತಿಂದು ತೇಗಿ ಬಿಡುತ್ತವೆ.
ಆಹಾರವನ್ನು ಸಂಪಾದಿಸುವುದೇ ಜೇಡ ಬಲೆ ಹೆಳೆಯುವ ಹಿಂದಿರುವ ಉದ್ದೇಶ. ತನ್ನ ಆಹಾರಕ್ಕಾಗಿ ಜೇಡ ಹೆಣೆಯುವ ಚಕ್ರವ್ಯೂಹದ ರಚನೆ ಬಹಳ ಸೂಕ್ಷ್ಮವಾಗಿದ್ದು, ಜೇಡನ ಗಾತ್ರಕ್ಕೆ ತಕ್ಕಂತೆ ಹಿರಿದುಕಿರಿದಾಗಿರುತ್ತದೆ.