ಶಂಕರ ಆಚಾರ್ಯ ರೂಪಿಸಿದ್ದಾರೆ ಸುಧಾರಿತ ಭತ್ತ ಕಟಾವು ಯಂತ್ರ




ಲೋಪದೋಷಗಳನ್ನು ತಿದ್ದುತ್ತಾ ಹೋದಂತೆ ಪರಿಪೂರ್ಣರಾಗುವುದು ಸಾಧ್ಯ ಎಂಬುದೊಂದು ಸುಭಾಷಿತ. ಇಂತಹ ಸುಭಾಷಿತವನ್ನು ಕಾರ್ಯರೂಪಕ್ಕೆ ತಂದವರು ಶಿರಿಯಾರದ ಶಂಕರ ಆಚಾರ್ಯ ಅವರು.


ತಾನು ಕಂಡ ಭತ್ತ ಕಟಾವು ಯಂತ್ರದಲ್ಲಿನ ನ್ಯೂನ್ಯತೆಯನ್ನು ಸರಿಪಡಿಸುತ್ತಾ ಸಾಗಿದಂತೆ ಸುಧಾರಿತ ಯಂತ್ರವನ್ನು ತಾನೇಕೆ ತಯಾರಿಸಬಾರದು ಎಂಬ ಪುಟ್ಟ ಆಲೋಚನೆ ಮೂಡಿದ್ದೇ ತಡ ಅದನ್ನು ಅನುಷ್ಠಾನಕ್ಕೆ ತಂದು ಕಳೆದ ಒಂದು ವರ್ಷದಿಂದ ಆ ಯಂತ್ರವನ್ನು ಅವರು ಯಶಸ್ವಿಯಾಗಿ ಬಳಸುತ್ತಾ ಬಂದಿದ್ದಾರೆ.

ಶಿರಿಯಾರ ಶಂಕರ ಆಚಾರ್ಯ ಅವರು ರೂಪಿಸಿದ ಸುಧಾರಿತ ಭತ್ತ ಕಟಾವು ಯಂತ್ರ


ಉಡುಪಿ ಜಿಲ್ಲೆಯ ಬಾರ್ಕೂರು ಸಮೀಪದ ಶಿರಿಯಾರದ 52 ವರ್ಷ ವಯಸ್ಸಿನ ಶಂಕರ ಆಚಾರ್ಯ ಅವರು ಪಡೆದಿರುವ ಶಿಕ್ಷಣ ಕೇವಲ ಆರನೇ ತರಗತಿ. ಆದರೆ ಅವರ ವ್ಯವಹಾರಿಕ ಜ್ಞಾನ ಮಾತ್ರ ಸಂಪೂರ್ಣ ಎಂಜಿನಿಯರಿಂಗ್! ಹಾಗಾಗಿಯೇ ಒಂದು ಸುಧಾರಿತ ಭತ್ತ ಕಟಾವು ಯಂತ್ರ ಅವರಿಂದ ರೂಪಿತಗೊಂಡಿದೆ.





ಶಿರಿಯಾರ ಶಂಕರ ಆಚಾರ್ಯ


ಅವರು ರೂಪಿಸಿದ ನಾಲ್ಕು ಅಡಿ ಅಗಲದ ಭತ್ತ ಕಟಾವು ಯಂತ್ರ ಗಂಟೆಗೆ 60 ಸೆಂಟ್ಸ್ ಗದ್ದೆಯಲ್ಲಿ ಬೆಳೆದ ಪೆರನ್ನು ಚೆನ್ನಾಗಿ ಕಟಾವು ಮಾಡಬಲ್ಲದು. ಒಂದು ಲೀಟರ್ ಸೀಮೆಎಣ್ಣೆಯಲ್ಲಿ ಸುಮಾರು ಮುಕ್ಕಾಲು ಗಂಟೆ ವರೆಗೆ ಯಂತ್ರವನ್ನು ಚಲಾಯಿಸಬಹುದು.

3 ಎಚ್‌ಪಿ ಸಾಮರ್ಥ್ಯದ ಜನರೇಟರ್‌ನ ಮೋಟಾರ್‌ನ್ನು ಯಂತ್ರಕ್ಕೆ ಅಳವಡಿಸಲಾಗಿದ್ದು, ರಿಕ್ಷಾದ ಯಂತ್ರದಲ್ಲಿನ ತಂತ್ರಜ್ಞಾನವನ್ನು ಇದಕ್ಕೆ ಬಳಸಿಕೊಳ್ಳಲಾಗಿದೆ. ರಿಕ್ಷಾದಂತೆ ನಾಲ್ಕು ಗೇರ್‌ಗಳಲ್ಲಿ ಯಂತ್ರ ಕಾರ್ಯ ನಿರ್ವಹಿಸುತ್ತಿದ್ದು, ರಿವರ್ಸ್ ಗೇರ್ ಸಹ ಇದಕ್ಕೆ ಅಳವಡಿಸಲಾಗಿದೆ. ಭತ್ತದ ಪೆರು ಹಾಗೂ ನೆಲದ ಅಂತರಕ್ಕೆ ತಕ್ಕಂತೆ ಕಟಾವು ಯಂತ್ರದ ಬ್ಲೇಡ್‌ಗಳನ್ನು ಮೇಲಕ್ಕೆ ಹಾಗೂ ಕೆಳಕ್ಕೆ ಮಾಡಲು ಬೇಕಾದ ವ್ಯವಸ್ಥೆಯನ್ನು ಕೂಡಾ ಅವರು ಇಲ್ಲಿ ಕಲ್ಪಿಸಿದ್ದಾರೆ.

ಯಂತ್ರವನ್ನು ಗದ್ದೆಯ ವರೆಗೆ ತೆಗೆದುಕೊಂಡು ಹೋಗುವಾಗ ಬ್ಲೇಡ್‌ಗಳು ಚಲಿಸದ ಕೇವಲ ಚಕ್ರಗಳು ಮಾತ್ರ ಚಲಿಸುವಂತೆ ವ್ಯವಸ್ಥೆಯನ್ನು ರೂಪಿಸಲಾಗಿದೆ. ಮಾತ್ರವಲ್ಲದೆ, ಯಂತ್ರವನ್ನು ಬೇರೆ ಬೇರೆ ಭಾಗಗಳಾಗಿ ಸುಲಭವಾಗಿ ಕಳಚುವ ಹಾಗೂ ಜೋಡಿಸುವ ವ್ಯವಸ್ಥೆಯನ್ನು ಕೂಡಾ ಕಲ್ಪಿಸಲಾಗಿದೆ. ಹಾಗಾಗಿ 190 ಕೆ.ಜಿ. ಭಾರದ ಯಂತ್ರವನ್ನು ಸುಲಭವಾಗಿ ಸಾಗಾಟ ಕೂಡಾ ಮಾಡಬಹುದಾಗಿದೆ.
ಸಿಂಧನೂರು ಮತ್ತು ಕೇರಳದಿಂದ ಯಂತ್ರಕ್ಕೆ ಬೇಕಾದ ಬಿಡಿಭಾಗಳನ್ನು ತಂದು ಜೋಡಿಸಿರುವ ಶಂಕರ ಆಚಾರ್ಯ ಅವರು, ಉಳಿದ ಎಲ್ಲ ಎಂಜಿನಿಯರಿಂಗ್ ಕೆಲಸವನ್ನು ಸ್ವತಃ ತಾವೇ ನಿರ್ವಹಿಸಿದ್ದಾರೆ. ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ಬೆಲ್ಟ್‌ಪದ್ಧತಿಯ ಕಟಾವು ಯಂತ್ರ ಲಭ್ಯವಿದ್ದರೆ, ಶಂಕರ ಅವರು ಚೆನ್ ಪದ್ಧತಿಯನ್ನು ಅಳವಡಿಸಿ ಯಂತ್ರದ ಕಾರ್ಯಕ್ಷಮತೆಯನ್ನು ಹೆಚ್ಚಿಸಿದ್ದಾರೆ.

ಮುಖ್ಯವಾಗಿ ಯಂತ್ರದಲ್ಲಿರುವ ತಂತ್ರಜ್ಞಾನವೆಂದರೆ, ಯಂತ್ರಹಾಗೂ ಬ್ಲೇಡ್‌ಗಳ ಚಲನೆಯ ಸಮನ್ವಯತೆ. ಇದನ್ನು ಅವರು ಪರಿಪೂರ್ಣವಾಗಿ ಅಭ್ಯಸಿಸಿದ ಕಾರಣ ಇದೊಂದು ಸುಧಾರಿತ ಯಂತ್ರವಾಗಿ ಮೂಡಿಬಂದಿದೆ. ಇವರ ಈ ಯಂತ್ರವನ್ನು ಕಂಡ ಹುಬ್ಬಳ್ಳಿಯ ಕಂಪನಿಯೊಂದು ಪೇಟೆಂಟ್ ಕೇಳಿದೆ.
 ಯಂತ್ರದ ಜತೆ ಶಂಕರ ಆಚಾರ್ಯ.

ಕಳೆದ ವರ್ಷ ಸುಗ್ಗಿ ಹಾಗೂ ಕೊಳಕೆ ಬೆಳೆಯ ಕಟಾವನ್ನು ಈ ಯಂತ್ರದ ಮೂಲಕ ತಮ್ಮ ಊರಿನಲ್ಲಿನಿರ್ವಹಿಸಿರುವ ಅವರು ಬಳಿಕ ಶಂಗೇರಿ ಹಾಗೂ ಶಿವಮೊಗ್ಗದ ಗದ್ದೆಗಳಲ್ಲಿ ಕಟಾವು ನಿರ್ವಹಿಸಿ ಬಂದಿದ್ದಾರೆ. ಈ ವರ್ಷವೂ ಈಗಾಗಲೇ ಊರಿನಲ್ಲಿ ಭತ್ತ ಕಟಾವಿಗಾಗಿ ಅನೇಕ ಮಂದಿ ಅವರನ್ನು ಸಂಪರ್ಕಿಸಿದ್ದು, ದೀಪಾವಳಿ ಬಳಿಕ ಮತ್ತೆ ಒಂದು ತಿಂಗಳ ಕಾಲ ಶಿವಮೊಗ್ಗದತ್ತ ಪಯಣ ಬೆಳಸಲಿದ್ದಾರೆ ಅವರು.


ಬಾಲ್ಯದಿಂದಲೇ ತಂದೆಯ ಜತೆ ಮರದ ಕೆಲಸಕ್ಕೆ ಹೋಗುತ್ತಿದ್ದ ಶಂಕರ ಆಚಾರ್ಯ ಅವರು ಇನ್ನೊಂದು ವಿಶೇಷತೆಯೆಂದರೆ, ಮನೆಯ ಪಂಚಾಂಗದಿಂದ ಪ್ರಾರಂಭಿಸಿ, ಮಾಡಿನ ವರೆಗಿನ ಕಾರ್ಯವನ್ನು ಏಕವ್ಯಕ್ತಿಯಾಗಿ ನಿಭಾಯಿಸಬಲ್ಲರು. ಪಂಪ್‌ಸೆಟ್, ಜನರೇಟರ್, ಮೋಟಾರು, ಟಿಲ್ಲರ್ ರಿಪೇರಿ, ವೆಲ್ಡಿಂಗ್ ಸಹಿತ ರೆಸ್‌ಮಿಲ್ ನಿರ್ವಹಣೆ ಮುಂತಾದ ಕೆಲಸವನ್ನು ಮಾಡಬಲ್ಲ ಅವರು, ಎಲ್ಲ ಕೆಲಸವನ್ನು ನೋಡಿಯೇ ಕಲಿತದ್ದು.